ಎಟ್ನ-
	ಸಿಸಿಲಿಯ ಪೂರ್ವ ತೀರದಲ್ಲಿರುವ ಪ್ರಸಿದ್ಧ ಜೀವಂತ ಅಗ್ನಿಪರ್ವತ. ಮೊಂಗಿಬೆಲ್ಲೊ ಸ್ಥಳೀಯ ಹೆಸರು. ಸು.450 ಚ. ಮೈ. ಹರಡಿದೆ. ಇದು ಸುತ್ತಲೂ ಉಗುಳಿದ ಲಾವಾ ಮತ್ತು ಬೂದಿ ಅನೇಕ ಕಡೆ ಫಲವತ್ತಾದ ಮಣ್ಣಾಗಿ ರೂಪಾಂತರಗೊಂಡಿದೆ. ನಿಯತವಲ್ಲದಿದ್ದರೂ ಇದರ ಆಕಾರ 25 ಮೈಲಿ ವ್ಯಾಸದ ಒಂದು ಶಂಕುವಿನಂತಿದೆ. ಬುಡ ದೀರ್ಘವೃತ್ತಾಕಾರವಾಗಿದೆ. ಇಳಿಜಾರಿನಲ್ಲಿ ಅನೇಕ (ಸು. 260) ಚಿಕ್ಕ ಚಿಕ್ಕ ಶಂಕುವಿನಾಕಾರದ ಗುಡ್ಡಗಳು ಎದ್ದಿವೆ. ಮೂಲ ಶಿಖರ ಸು.10,700 ಎತ್ತರ. ಇದರ ಆಕಾರ ಎತ್ತರಗಳು ಆಗಿಂದಾಗ್ಗೆ ಆಗುವ ಸಿಡಿತಗಳಿಂದಾಗಿ ಸತತವಾಗಿ ಬದಲಾಗುತ್ತಿರುತ್ತದೆ. 9,650 ಎತ್ತರದಲ್ಲಿ ಒಂದು ವೀಕ್ಷಣಾಲಯವನ್ನು ಸ್ಥಾಪಿಸಲಾಗಿದೆ (1887). ಸುತ್ತಲಿನ ಪ್ರದೇಶದಲ್ಲಿ ಶೀತೋಷ್ಣ ವಾಯುಗುಣವಿದ್ದು ಫಲವತ್ತಾಗಿದೆ. ಇದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು : (i) ತೀರದಿಂದ 1,500 ವರೆಗಿನ ಪ್ರದೇಶ : ಇಲ್ಲಿ ಬಾಳೆ, ಕಬ್ಬು, ಅಂಜೂರ, ಕಿತ್ತಳೆ ಪ್ರಮುಖ ಬೆಳೆ. (ii) 4,000 ವರೆಗಿನ ಪ್ರದೇಶ : ದ್ರಾಕ್ಷಿ, ಆಲಿವ್ ಇಲ್ಲಿನ ಬೆಳೆಗಳು. ಈ ಎರಡು ಪ್ರದೇಶಗಳಲ್ಲಿ ಅಧಿಕ ಜನಸಾಂದ್ರತೆಯಿದೆ. (iii) 6,000 ವರೆಗಿನ ಪ್ರದೇಶ : ಓಕ್, ಪೈನ್ ಮರಗಳಲ್ಲದೆ ಬಾರ್ಲಿ, ಮುಸುಕಿನ ಜೋಳವನ್ನು ಬೆಳೆಯುತ್ತಾರೆ. (iv) 6,000 ಮೀರಿದ ಪ್ರದೇಶ : ವರ್ಷವೆಲ್ಲ ಹಿಮಾಚ್ಛಾದಿತವಾಗಿರುವುದರಿಂದ ಉಪಯುಕ್ತವಾದ ಬೆಳೆ ಇಲ್ಲ.

	ಐತಿಹಾಸಿಕವಾಗಿ ಇಲ್ಲಿಯ ವರೆಗೆ ಸು.150ಕ್ಕೂ ಹೆಚ್ಚು ಸಿಡಿತಗಳನ್ನು ಗುರುತಿಸಲಾಗಿದೆ. ಕ್ರಿ.ಪೂ. 475ರ ಸಿಡಿತ ಈವರೆಗೆ ಗೊತ್ತಾದುವುಗಳಲ್ಲಿ ಮೊದಲಿನದು. 17, 18, 19ನೆಯ ಶಮಾನದಲ್ಲಿ ಸರಾಸರಿ 20-25 ಸಿಡಿತಗಳಾದುವು; ಇವುಗಳ ಅಂತರ 4 ರಿಂದ 5 ವರ್ಷಗಳು. ಅನಂತರದ ಸಿಡಿತಗಳ ಅಂತರ 7-8 ವರ್ಷಗಳು. 1069, 1669ರ ಸಿಡಿತಗಳಿಂದ ಅಪಾರ ಹಾನಿ ಆಯಿತು. 1669ರಲ್ಲಾದ ಸಿಡಿತದಿಂದಾಗಿ ಕಾಟಾನಿಯ ಪಟ್ಟಣದ ಬಹುಪಾಲು ನಾಶವಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ